ಕಾಬ್ರ್ಯುರೇಟರ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ವಿದ್ಯುತ್ ಕಿಡಿಯಿಂದ ಇಂಧನವನ್ನು ಹೊತ್ತಿಸುವ ಏರ್ಪಾಡುಳ್ಳ ಅಂತರ್ದಹನ ಎಂಜಿನ್ನುಗಳಲ್ಲಿ ಸಿಲಿಂಡರಿನೊಳಕ್ಕೆ ತೈಲೇಂಧನ ಬಾಷ್ಪಶೀಲವನ್ನು ಹಬೆಯನ್ನು ಅಗತ್ಯ ಪ್ರಮಾಣದ ಗಾಳಿಯನ್ನೂ ಉತ್ತಮ ದಹನ ಶೀಲ ಮಿಶ್ರಣವಾಗುವಂತೆ ನಿರ್ದಿಷ್ಟ ಪ್ರಮಾಣದಲ್ಲಿ ಬೆರೆಸುವ ಸಾಧನ. ಬದಲಾಗುತ್ತಿರಬಹುದಾದ ಎಂಜಿನ್ನಿನ ವೇಗ ಮತ್ತು ಅದು ಹೊರುತ್ತಿರುವ ತೂಕಕ್ಕೆ ಅನುಗುಣವಾಗಿ ಮಿಶ್ರಣದ ಪ್ರಮಾಣವೂ ವ್ಯತ್ಯಾಸವಾಗಿ ಎಲ್ಲ ಸಂದರ್ಭಗಳಲ್ಲೂ ಕ್ಷಿಪ್ರವಾಗಿ ಹೊತ್ತಿಕೊಳ್ಳುವ ಸ್ಫೋಟಕ ಲಕ್ಷಣವನ್ನು ಅದು ಪಡೆದಿರಬೇಕಾಗುತ್ತದೆ. ಅಲ್ಲದೆ ಎಂಜಿನ್ನು ಉತ್ಪಾದಿಸುವ ಸಾಮಥ್ರ್ಯದ ಪ್ರಮಾಣವೂ ಕಾಬ್ರ್ಯುರೇಟರಿನ ಹಿಡಿತದಲ್ಲಿರುತ್ತದೆ.

 ಎಂಜಿನ್ನಿಗೆ ಸೇರಿದಂತೆ ಸೂಕ್ತಸ್ಥಳದಲ್ಲಿ ತೋರಿಸಿರುವ ಸರಳ ರಚನೆಯ ಒಂದು ಕಾಬ್ರ್ಯುರೇಟರಿನ ಚಿತ್ರದ ಸಹಾಯದಿಂದ ಅದರ ರಚನೆ ಹಾಗೂ ಕಾರ್ಯವನ್ನು ತಿಳಿದುಕೊಳ್ಳಬಹುದಾಗಿದೆ. ಎತ್ತರದ ಮಟ್ಟದಲ್ಲಿರುವ ಪೆಟ್ರೋಲ್ ಟ್ಯಾಂಕಿನಿಂದ ಸರಬರಾಜು ನಾಳದ ಮೂಲಕ ತೇಲುಕೊಷ್ಠದ (ಫ್ಲೋಟ್ ಚೇಂಬರ್) ಕೆಳಗಡೆಯ ರಂಧ್ರದಿಂದ ಅದರ ಒಳಕ್ಕೆ ಪೆಟ್ರೋಲು ನುಗ್ಗುತ್ತದೆ. ಕೋಷ್ಠದೊಳಗಿರುವ ಒಂದು ತೇಲು ಬುರುಡೆ, ಒಳಗೆ ಬಂದ ಪೆಟ್ರೋಲಿನ ಮಟ್ಟಕ್ಕನುಗುಣವಾಗಿ ಮೇಲಕ್ಕೇರಿ ಅಥವಾ ಕೆಳಕ್ಕಿಳಿದು, ತನ್ನ ಮೇಲೆ ಆಸರೆಯಾಗಿರುವ ಮಂಡಿಕೀಲಿನ ತೂಕಗಳ ಸಹಾಯದಿಂದ ಕವಾಟದ ಸೂಜಿಯನ್ನು ರಂಧ್ರದ ಒಳಕ್ಕೆ ತಳ್ಳಿ ಅಥವಾ ಹಿಂದಕ್ಕೆ ಎಳೆದುಕೊಂಡು, ಪೆಟ್ರೋಲಿನ ಹರಿವನ್ನು ನಿಯಂತ್ರಿಸಿ ಕೋಷ್ಠದ ಒಳಗೆ ಯಾವಾಗಲೂ ಒಂದು ಸಮ ಮಟ್ಟದಲ್ಲಿ ಪೆಟ್ರೋಲು ಇರುವಂತೆ ಕಾಯ್ದುಕೊಳ್ಳುತ್ತದೆ. ಈ ಕೋಷ್ಠದಿಂದ ಹೊರಟ ಒಂದು ಜೆಟ್‍ನಾಳಕ್ಕೆ ಪೆಟ್ರೋಲು ಹರಿದು ಅದರ ಸೂಸು ಬಾಯಿಯ ತುದಿಯ ಕೊಂಚವೇ ಕೆಳಗಿನ ಮಟ್ಟಕ್ಕೆ ಬಂದು ನಿಂತಿರುತ್ತದೆ. ಎಂಜಿನ್ನಿನ ಸಿಲಿಂಡರಿನೊಳಕ್ಕೆ ಗಾಳಿಯನ್ನು ಎಳೆದುಕೊಳ್ಳುವ ಕೊಳವೆಯ ನಡುವಿನ ಪ್ರದೇಶದಲ್ಲಿ ಈ ಜೆಟ್‍ನಾಳವಿದ್ದು ಇದರ ಸುತ್ತಲೂ ಕೊಳವೆಯ ಒಳಭಾಗ ಉಬ್ಬಿರುವಂತೆ ಮಾಡಿರುತ್ತದೆ. 

 ಎಂಜಿನ್ನಿನ ಚೋಷಣ ಘಾತದ (ಸಕ್ಷನ್ ಸ್ಟ್ರೋಕ್) ಸಮಯದಲ್ಲಿ ಸಿಲಿಂಡರಿನೊಳಗಣ ಆಡುಬೆಣೆ ಕೆಳಕ್ಕಿಳಿಯುತ್ತಿದ್ದು ಒಳಗೆ ನಿರ್ವಾತ ಅಥವಾ ಅಲ್ಪವಾತ ಸ್ಥಿತಿಯೇರ್ಪಟ್ಟು. ತೆರೆದಿರುವ ಸೆಳೆತದ ಕವಾಟದ ಮೂಲಕ ಹೊರಗಿನ ಗಾಳಿಯನ್ನು ಈ ಕೊಳವೆಯಿಂದ ಎಳೆದುಕೊಳ್ಳುವಾಗ ಪೆಟ್ರೋಲ್ ಜೆಟ್ಟಿನ ಸುತ್ತಲಿನ ಸಂಕುಚಿತ (ಚೋಕ್) ಮಾರ್ಗದಲ್ಲಿ ಗಾಳಿ ಹರಿದು ಬರುತ್ತಿರುವಾಗ ಅದರ ವೇಗ ಹೆಚ್ಚಿ ಸ್ಥಳೀಯವಾಗಿ ಒತ್ತಡ ಕಡಿಮೆಯಾಗುತ್ತದೆ. ಇದರಿಂದಾಗಿ ಸೂಸುಬಾಯಿಯ ಮೂಲಕ ಪೆಟ್ರೋಲ್ ಉಕ್ಕಿ ಹೊರಬರುತ್ತದೆ. ಹಾಗೆಯೇ ಕೊಂಚ ಭಾಗ ಆವಿಯಾಗಿ ಮೋಡದಂತೆ ಗಾಳಿಯೊಡನೆ ಬೆರೆತುಕೊಂಡು ಸಿಲಿಂಡರಿನೊಳಕ್ಕೆ ಪ್ರವೇಶಿಸುತ್ತದೆ. ಈ ಮಾರ್ಗದಲ್ಲಿ ಮತ್ತು ಸಿಲಿಂಡರಿನೊಳಕ್ಕೆ ಸೇರುವಾಗ ಸುತ್ತುವರಿದ ಬಿಸಿ ಪ್ರದೇಶದಿಂದಾಗಿ ಪೆಟ್ರೋಲ್ ಪೂರ್ತಿ ಆವಿಯಾಗಿ ಗಾಳಿಯೊಡನೆ ಸ್ಫೋಟಕ ಮಿಶ್ರಣವಾಗುತ್ತದೆ.

 ಈ ಮಿಶ್ರಣ ಹೋಗುವ ಕೊಳವೆ ಮಾರ್ಗದಲ್ಲಿ ಒಂದು ನಿಯಂತ್ರಕ ಕವಾಟವಿದ್ದು (ಥ್ರಾಟಲ್ ವಾಲ್ವ್) ಅದರ ಚಾಲನೆಯಿಂದ ಒಳಹೋಗುವ ಮಿಶ್ರಣದ ಒಟ್ಟು ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡಬಹುದಾಗಿದೆ. ಹೀಗೆ ಎಂಜಿನ್ನಿನ ಉತ್ಪಾದಿತ ಸಾಮಥ್ರ್ಯ ನಿಯಂತ್ರಿಸುವ ಈ ಕವಾಟ, ಮೋಟಾರು ಬಂಡಿಯ ಎಂಜಿನ್ನಿನ ಚಾಲಕನ ವೇಗೋತ್ಕರ್ಷಕ ಜೋಡಣೆಯ (ಏಕ್ಸಲರೇಟರ್) ಮೂಲಕ ಆಡಿಸುವಂತಿರುತ್ತದೆ ಅಥವಾ ಸ್ಥಿರ ಎಂಜಿನ್ನಿನಲ್ಲಾದರೆ ವೇಗ ನಿಯಂತ್ರಕದ ಹಿಡಿತದಲ್ಲಿರುತ್ತದೆ.

 ಈಗ ಸ್ಫೋಟಕ ಮಿಶ್ರಣದ ಆಂತರಿಕ ಪ್ರಮಾಣ ಮತ್ತು ಅದರ ನಿರ್ಧಾರಕ ಲಕ್ಷಣಗಳನ್ನು ವಿವೇಚಿಸಬಹುದಾಗಿದೆ. ಇಂಥ ಎಂಜಿನ್ನಿನಲ್ಲಿ ಪೆಟ್ರೋಲೇ ಅಲ್ಲದೆ ಸಮಾನ ಲಕ್ಷಣಗಳುಳ್ಳ ಆಲ್ಕೊಹಾಲ್, ಬೆನ್ಸಾಲ್, ಸೀಮೆಎಣ್ಣೆ ಇಂಥ ಇತರ ಇಂಧನಗಳನ್ನು ಬಳಸಬಹುದಾದರೂ ಪೆಟ್ರೋಲನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ರಾಸಾಯನಿಕ ರೀತ್ಯಾ ಅದು ಸರಿಯಾದ ಸ್ಫೋಟಕ ಮಿಶ್ರಣವಾಗಬೇಕಾದರೆ, ಇಂಧನ ಹಾಗೂ ಗಾಳಿಯ ಪರಸ್ಪರ ಪ್ರಮಾಣ ತೂಕದ ರೀತಿಯಲ್ಲಿ ಸುಮಾರು 1ಕ್ಕೆ 15ರಷ್ಟಿರಬೇಕಾಗುತ್ತದೆ. 1ಕ್ಕೆ ಸುಮಾರು 8ರಷ್ಟುಳ್ಳ ಸಮೃದ್ಧ ಮಿಶ್ರಣದಿಂದ ಹಿಡಿದು ಒಂದಕ್ಕೆ ಸುಮಾರು 20ರಷ್ಟಿರುವ ತೆಳುವಾದ ಪ್ರಮಾಣದವರೆಗೂ ಅದಕ್ಕೆ ಸ್ಫೋಟಕ ಗುಣವಿರುವುದಾದರೂ ಬಳಕೆಯಲ್ಲಿ ಎಂಜಿನ್ನನ್ನು ತಣ್ಣಗೆ ನಿಂತ ಸ್ಥಿತಿಯಿಂದ ತೊಡಗಿಸ ಬೇಕಾದರೆ ಮತ್ತು ನಿಧಾನವಾಗಿ ಓಡಿಸುತ್ತಿರುವಾಗ ಸುಮಾರು 1:12 ರ ಪ್ರಮಾಣವೂ ವೇಗವಾಗಿ ಓಡಿಸುತ್ತಿದ್ದು ಮಿತವ್ಯಯದ ಅಗತ್ಯಕ್ಕೆ 1:17ರ ಪ್ರಮಾಣವೂ ಅಧಿಕ ಸಾಮಥ್ರ್ಯದ ಆವಶ್ಯಕತೆ ಇದ್ದಾಗ ಮತ್ತೆ 1:12ರ ಸಮೃದ್ಧ ಪ್ರಮಾಣವೂ ಇರಬೇಕಾಗುತ್ತದೆ. ಈ ಕಾರ್ಯವನ್ನು ಸಾಧಿಸುವ ತ್ರಾಣ ಕಾಬ್ರ್ಯುರೇಟರ್‍ಗೆ ಇರಬೇಕು.

 ಹಿಂದೆ ವಿವರಿಸಿದ ಸರಳರಚನೆಯ ಕಾಬ್ರ್ಯುರೇಟರ್ ಒಂದೇ ವೇಗದಲ್ಲಿ ಓಡುತ್ತಿರುವ ಸ್ಥಿರ ಎಂಜಿನ್ನಿಗೆ ಮಾತ್ರ ಸರಿಹೊಂದುವುದಾಗಿದ್ದು ಇತರ ಸಂದರ್ಭಗಳಲ್ಲಿ ಮೇಲೆ ಸೂಚಿಸಿದ ರೀತಿಯಲ್ಲಿ ನಿರ್ವಹಿಸುವುದರ ಬದಲು ಅದಕ್ಕೆ ವ್ಯತಿರಿಕ್ತವಾಗಿ ವರ್ತಿಸುವುದನ್ನು ಕಾಣಬಹುದು. ಇದಕ್ಕೆ ಮುಖ್ಯ ಕಾರಣ ಚೋಕ್ ನಾಳದಲ್ಲಿನ ಗಾಳಿಯ ವೇಗಕ್ಕೂ ಪೆಟ್ರೋಲಿನ ಉಕ್ಕುವಿಕೆಯನ್ನು ಪ್ರಚೋದಿಸುವ ಒತ್ತಡ ಇಳಿತಕ್ಕೂ ಇರುವ ಪರಸ್ಪರ ಸಂಬಂಧ. ನಿಯಂತ್ರಕ ಕವಾಟವನ್ನು ತೆರೆದಂತೆಲ್ಲ ಒಳ ಹೋಗುವ ಗಾಳಿಯ ಪ್ರಮಾಣ ಹೆಚ್ಚುತ್ತದೆ. ಪೆಟ್ರೋಲಿನ ಉಕ್ಕುವಿಕೆ ಈ ಹೆಚ್ಚಳಕ್ಕೆ ಸಮಾನ ರೀತಿಯಾಗಿರುವುದರ ಬದಲು ಸುಮಾರು ಅದರ ವರ್ಗಪ್ರಮಾಣಕ್ಕೆ ಅನುಗುಣವಾಗುವುದರಿಂದ ಒಂದು ಗೊತ್ತಾದ ವೇಗದಲ್ಲಿ ಸರಿಪ್ರಮಾಣದ ಮಿಶ್ರಣವನ್ನು ಒದಗಿಸುವ ಕಾಬ್ರ್ಯುರೇಟರ್, ಎಂಜಿನ್ನಿನ ವೇಗ ಹೆಚ್ಚಿದ ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಪೆಟ್ರೋಲನ್ನು ಒದಗಿಸಿ ಅತಿ ಸಮೃದ್ಧ ಮಿಶ್ರಣವನ್ನೂ ತೊಡಗಿಸುವಂಥ ಕಡಿಮೆ ವೇಗದ ಸಂದರ್ಭದಲ್ಲಿ ಅತಿ ಕಡಿಮೆ ಪೆಟ್ರೋಲನ್ನು ಉಕ್ಕಿಸಿ ಬಹಳ ತೆಳುವಾದ ಮಿಶ್ರಣವನ್ನೂ ಕೊಡುತ್ತದೆ.

 ಎಲ್ಲ ಆಧುನಿಕ ಕಾಬ್ರ್ಯುರೇಟರುಗಳೂ ಈ ಮಾನ್ಯತೆಯನ್ನು ಒಂದಲ್ಲ ಒಂದು ರೀತಿ ಸರಿಪಡಿಸುವ ಪ್ರಯತ್ನಗಳಾಗಿರುವಂತೆ ಅಷ್ಟೇ ವೈವಿಧ್ಯದಿಂದಲೂ ಕೂಡಿವೆ. ಇದೇ ಅಲ್ಲದೆ ಸರಳ ಕಾಬ್ರ್ಯುರೇಟರಿನ ಇನ್ನೂ ಕೆಲವು ನ್ಯೂನತೆಗಳೆಂದರೆ ಸ್ವಲ್ಪ ತರೆದಿರುವ ನಿಯಂತ್ರಕ ಕವಾಟವನ್ನು ತತ್‍ಕ್ಷಣವೇ ಪೂರ್ತಿ ತೆರೆದು ಎಂಜಿನ್ನನ್ನು ತ್ವರಿತಗೊಳಿಸಲು ಯತ್ನಿಸಿದಾಗ, ದ್ರವದ ಜಡತ್ವದಿಂದಾಗಿ ಆ ಕ್ಷಣಕ್ಕೇ ಅಗತ್ಯವಾದ ಅಧಿಕ ಪ್ರಮಾಣದಲ್ಲಿ ಪೆಟ್ರೋಲ್ ಬರದಿರುವುದು; ಚಳಿಗಾಲದಲ್ಲಿ ಒಂದು ನಿರ್ದಿಷ್ಟ ವೇಗಕ್ಕೆ ಸರಿಹೊಂದಿಸಿ ಇಟ್ಟಿರುವ ಕಾಬ್ರ್ಯುರೇಟರ್ ಬೇಸಗೆಯಲ್ಲಿ ಅದೇ ವೇಗಕ್ಕೆ ಸಮೃದ್ಧ ಮಿಶ್ರಣವನ್ನು ಕೊಡುವುದು; ಭೂಮಟ್ಟದಿಂದ ಎತ್ತರಕ್ಕೆ ಹೋದಂತೆ ವಾಯುವಿನ ಒತ್ತಡ ಕಡಿಮೆಯಾದಾಗ ಗಾಳಿ ತೆಳುವಾದಂತೆ ಮಿಶ್ರಣ ಅತಿ ಸಮೃದ್ಧವಾಗಿ. ಎಂಜಿನ್ನಿನ ಬಲ ಕ್ಷೀಣಗೊಳ್ಳುವುದರ ಜೊತೆಗೆ ಇಂಧನ ದುಂದು ವ್ಯರ್ಥವಾಗುವುದು (ಪರ್ವತ ಪ್ರದೇಶದ ಮೋಟಾರು ಯಾನ ಹಾಗೂ ವಿಮಾನ ಯಾನದಲ್ಲಿ ಇದು ಮುಖ್ಯವಾಗಿ ಗಮನಾರ್ಹವಾದದ್ದು). ಕಾಬ್ರ್ಯುರೇಟರ್ ಇಂಥ ಎಲ್ಲ ಸಂದರ್ಭಗಳಲ್ಲೂ ಸರಿಯಾಗಿ ಕಾರ್ಯ ನಿರ್ವಹಿಸುವಂತಿದ್ದು ಅಗತ್ಯವಾದ ಹೊಂದಾಣಿಕೆ ಸಜ್ಜುಗಳು ಸರಳ ರಚನೆಯವಾಗಿ ವಿವಿಧ ಭಾಗಗಳು ದೃಢವಾಗಿಯೂ ಸುಗಮ್ಯವಾಗಿಯೂ ದುರಸ್ತಾಗಿಡಲು ಸುಲಭವಾಗಿಯೂ ಇರಬೇಕಾಗುತ್ತದೆ.

 ಪೆಟ್ರೋಲ್ ಜೆಟ್ಟಿನ ಸೂಸುಬಾಯಿಯಲ್ಲಿ ಒಂದು ಸೂಜಿ ಕವಾಟವನ್ನಿಡುವುದರಿಂದ ಮತ್ತು ಅಥವಾ ಎಂಜಿನ್ನಿನ ಗಾಳಿ ಸೆಳೆಯುವ ನಳಿಕೆಯ ಹೊರದ್ವಾರದಲ್ಲಿ ಹೆಚ್ಚು ಕಡಿಮೆ ಮಾಡಬಹುದಾದ ಕಂಡಿಯನ್ನಿಡುವುದರಿಂದ ವಿವಿಧ ಸಂದರ್ಭಗಳಿಗೆ ಮಿಶ್ರಣವನ್ನು ಸರಿಹೊಂದಿಸುವ ಏರ್ಪಾಡು ಪೂರ್ತಿ ತೃಪ್ತಿದಾಯಕವಲ್ಲದಿದ್ದರೂ ಅತಿ ಸುಲಭವಾಗಿದ್ದು ಕೆಲವು ಸ್ಥಿರ ಎಂಜಿನ್ನುಗಳಲ್ಲೂ (ಸೂಕ್ತ ತಂತಿ ಹಿಡಿಕೆಗಳೊಡನೆ) ಮೋಟಾರ್ ಸೈಕಲ್ಲಿನಂಥ ಸಾಮಾನ್ಯ ಸಾಮಥ್ರ್ಯದ ಎಂಜಿನ್ನುಗಳಲ್ಲೂ ಬಳಕೆಯಲ್ಲಿವೆ.

 ಕುಳಿ ಮಾದರಿಯ (ವೆಲ್ ಟೈಪ್, ಅಂತರ್ಗತ ಜೆಟ್ ಉಳ್ಳ ಸಬ್‍ಮಜ್ರ್ಡ್ ಜೆಟ್) ಕಾಬ್ರ್ಯುರೇಟರ್ ಒಂದರ ತತ್ತ್ವಶಃ ನಿರೂಪಣೆಯನ್ನು-ಅದರ ಸರಳ ಚಿತ್ರದೊಡನೆ (ಚಿತ್ರ 2) ಪರಿಶೀಲಿಸುವುದರಿಂದ-ರಚನೆಯಲ್ಲಿ ಅಳವಡಿಸುತ್ತಿರುವ ಮಾರ್ಪಾಡುಗಳನ್ನು ಸೂಚಕವಾಗಿ ತಿಳಿಯಬಹುದು. ಇಲ್ಲಿ ಸರಳ ಕಾಬ್ರ್ಯುರೇಟರಿನ ಪ್ರಧಾನ ಜೆಟ್ಟಿನ ಜೊತೆಗೆ ಪ್ರತ್ಯೇಕವಾಗಿ ಅಥವಾ ಸಮಾನ ಕೇಂದ್ರಕವಾಗಿ ಪರಿಹಾರಕ ಜೆಟ್ ಒಂದನ್ನು ಉಪಯೋಗಿಸಿದೆ. ಇದಕ್ಕೆ ಇಂಧನದ ಸರಬಾರಾಜು ವಾಯುಮಂಡಲಕ್ಕೆ ತೆರೆದಿರುವ ಒಂದು ಕುಳಿಯಿಂದ (ಈ ಕುಳಿಗೆ ಪೆಟ್ರೋಲ್ ಬರುವುದು ತೇಲುಕೋಷ್ಠದಿಂದ) ಒಂದು ಸಣ್ಣ ರಂಧ್ರದ ಮೂಲಕ ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ. ನಿಗದಿಯಾದ ವೇಗದಲ್ಲಿ ಎಂಜಿನ್ನು ಓಡುತ್ತಿರುವಾಗ ಈ ಎರಡೂ ಜೆಟ್‍ಗಳಿಂದ ಒದಗುವ ಪೆಟ್ರೋಲು ಚೋಕ್ ನಳಿಕೆಯ ಗಾಳಿಯೊಡನೆ ಬೆರೆತು ಸರಿಮಿಶ್ರಣವನ್ನು ಕೊಡುತ್ತದೆ. ಈಗ ಹಿಸುಕುಕವಾಟವನ್ನು ತೆರೆಯುವುದರಿಂದ ಚೋಕ್ ನಳಿಗೆಯಲ್ಲಿ ಹಾಯುವ ಗಾಳಿಯ ವೇಗ ಹೆಚ್ಚಾಯಿತೆನ್ನಿ. ಹಿಂದೆ ತಿಳಿಸಿರುವಂತೆ ಪ್ರಧಾನ ಜೆಟ್ಟಿನಲ್ಲಿ ಪೆಟ್ರೋಲ್ ಸುಮಾರು ವರ್ಗ ಪ್ರಮಾಣದಲ್ಲಿ ಹೆಚ್ಚಾಗುವುದರಿಂದ ಮಿಶ್ರಣವನ್ನು ಸಮೃದ್ಧಗೊಳಿಸುತ್ತದೆ. ಅದೇ ಸಮಯದಲ್ಲಿ ಪರಿಹಾರಕ ಜೆಟ್ಟಿನ ಮೇಲೂ ಸೆಳೆತ ಹೆಚ್ಚಾಗುವುದಾದರೂ ಅದಕ್ಕೆ ಕುಳಿಯಲ್ಲಿ ಒದಗುತ್ತಿರುವ ಪೆಟ್ರೋಲ್ ನಿರ್ದಿಷ್ಟ ಪ್ರಮಾಣದಲ್ಲಿ ಪ್ರಾಪ್ತವಾಗದ್ದರಿಂದ ಅದರ ಸರಬರಾಜು ಕ್ಷೀಣಿಸುತ್ತದೆ. ಈ ರೀತಿ ಅದು ಪರಿಹಾರಕವಾಗಿ ವರ್ತಿಸಿ ಹೆಚ್ಚಿದ ವೇಗದಲ್ಲಿ ಒಟ್ಟು ಮಿಶ್ರಣ ಸಮೃದ್ಧವಾಗದೆ ಸರಿ ಪ್ರಮಾಣದಲ್ಲಿರುವಂತೆ ಮಾಡುತ್ತದೆ. ವೇಗ ಇನ್ನೂ ಹೆಚ್ಚಿದಾಗ ಪರಿಹಾರಕ ಜೆಟ್ಟು ಪೆಟ್ರೋಲಿನ ಬದಲು ಅಗತ್ಯವಾದ ಹೆಚ್ಚಿನ ಗಾಳಿಯನ್ನೇ ಸೇರಿಸಲೂಬಹುದು. 

 ಇದಲ್ಲದೆ ಕುಳಿಯಿಂದ ಹೊರಟ ಇನ್ನೊಂದು ಉಪನಳಿಗೆ ನಿಯಂತ್ರಕ ಕವಾಟದ ಮುಚ್ಚಿದ ಸ್ಥಾನದ ಸ್ವಲ್ಪ ಮೇಲ್ಮಟ್ಟದಲ್ಲಿ ಎಂಜಿನ್ನಿನ ಪ್ರವೇಶ ನಳಿಗೆಗೆ ಸೇರಿರುವುದನ್ನು ಕಾಣಬಹುದು. ಎಂಜಿನ್ನನ್ನು ತೊಡಗಿಸುವಾಗ ಮತ್ತು ತೂಕರಹಿತವಾಗಿ ಎಂಜಿನ್ನು ನಿಧಾನವಾಗಿ ಓಡುವಾಗ ಇದು ಉಪಯೋಗಕ್ಕೆ ಬರುತ್ತದೆ. ಇಂಥ ಸಂದರ್ಭದಲ್ಲಿ ನಿಯಂತ್ರಕ ಕವಾಟ ಹೆಚ್ಚು ಕಡಿಮೆ ಮುಚ್ಚಿದಂತೆಯೇ ಇದ್ದು ಚೋಕ್ ನಳಿಗೆಯಲ್ಲಿನ ಕ್ಷೀಣವಾಗಿರುವ ಗಾಳಿಯ ವೇಗ ಪ್ರಧಾನ ಜೆಟ್ಟಿನಿಂದಾಗಲೀ ಪರಿಹಾರಕ ಜೆಟ್ಟಿನಿಂದಾಗಲೀ ಇಂಧನವನ್ನು ಸೆಳೆಯಲು ಅಸಮರ್ಥವಾಗಿರುತ್ತದೆ. ಆದರೆ ಚಿಕ್ಕದಾದ ಈ ಉಪನಾಳದಲ್ಲಿ ಸೆಳೆತ ಸಾಕಷ್ಟಿದ್ದು ತುಂಬಿದ ಕುಳಿಯಿಂದ ಅಗತ್ಯ ಪ್ರಮಾಣದ ಪೆಟ್ರೋಲನ್ನು ಸೆಳೆದುಕೊಂಡು ಸೂಕ್ತವಾದ ಸಮೃದ್ಧ ಮಿಶ್ರಣವನ್ನು ಒದಗಿಸಲು ಇದು ಸಮರ್ಥವಾಗುತ್ತದೆ. ನಿಯಂತ್ರಕ ಕವಾಟ ಕ್ರಮೇಣ ತೆರೆದಂತೆ ತಾನಾಗಿಯೇ ಇದರ ಕಾರ್ಯ ನಿಂತುಹೋಗುತ್ತದೆ.

ಮೋಟಾರು ಎಂಜಿನ್ನಿನ ಕಾಬ್ರ್ಯುರೇಟರುಗಳಲ್ಲಿ ಕ್ಷಿಪ್ರ ವೇಗವೃದ್ದಿಗೆ ಒಂದು ತ್ವರಿತ ಪಂಪು (ಏಕ್ಸಲರೇಷನ್ ಪಂಪ್) ವಿಮಾನ ಎಂಜಿನ್ನಿನ ಕಾಬ್ರ್ಯುರೇಟರುಗಳಲ್ಲಿ ಔನ್ನತ್ಯಕ್ಕೆ ಅನುಗಣವಾಗಿ ಮಿಶ್ರಣವನ್ನು ನಿಯಂತ್ರಿಸುವ ಏರ್ಪಾಡು, ಏರುತಗ್ಗಿನ ಗುಡ್ಡ ಪ್ರದೇಶಗಳಲ್ಲಿ ಓಡಾಡುವ ವಾಹನದ ಎಂಜಿನ್ನುಗಳಲ್ಲಿ ಪಕ್ಕದಲ್ಲಿ ಪ್ರತ್ಯೇಕವಾಗಿರುವ ಬದಲು ಜೆಟ್ಟಿನ ನಳಿಗೆಯ ಸಕೇಂದ್ರಿಯವಾಗಿರುವ ವಲಯಾಕಾರದ ತೇಲುಕೋಷ್ಠ. ಇವನ್ನು ಕಾಬ್ರ್ಯುರೇಟರಿನ ಇತರ ಮಾರ್ಪಾಡುಗಳಲ್ಲಿ ಹೆಸರಿಸಬಹುದು.

 ವಿಮಾನದ ಹಾಗೂ ಚಳಿ ಪ್ರದೇಶಗಳಲ್ಲಿನ ಎಂಜಿನ್ ಕಾಬ್ರ್ಯುರೇಟರುಗಳು ಎದುರಿಸಬೇಕಾದ ಇನ್ನೊಂದು ಸಮಸ್ಯೆಯೆಂದರೆ ಹಿಮಗಟ್ಟುವಿಕೆ (ಐಸಿಂಗ್). ಪೆಟ್ರೋಲ್ ದ್ರವ ಎಂಜಿನ್ನಿನ ಪ್ರವೇಶ ನಳಿಗೆಯಲ್ಲಿ ಆವಿಯಾಗಿ ಪರಿವರ್ತಿತವಾದಾಗ ಸ್ಥಳೀಯವಾಗಿ ತಂಪನ್ನುಂಟುಮಾಡುತ್ತದೆಯಷ್ಟೆ. ವಾತಾವರಣದ ಉಷ್ಣತೆ ಸಾಕಷ್ಟು ಕಡಿಮೆಯಿರುವಾಗ ಇದರ ದೆಸೆಯಿಂದ ಗಾಳಿಯಲ್ಲಿರುವ ತೇವ ಹೆಪ್ಪುಗಟ್ಟಿ ಕವಾಟಗಳ ಬಳಿ ತಡೆಯಾಗಿ ತೊಂದರೆಯುಂಟು ಮಾಡುವ ಸಂಭವವಿರುತ್ತದೆ. ನಿಯಂತ್ರಕ ಕವಾಟ ಭಾಗಶಃ ತೆರೆದಿರುವಾಗ ಗಾಳಿ ವಿಸ್ತರಿಸುವುದರಿಂದಲೂ ಇಂಥ ತಂಪು ಉಂಟಾಗುತ್ತದೆ. ಪ್ರವೇಶ ನಳಿಗೆಯನ್ನು ಬೆಚ್ಚಗಿಡುವುದರಿಂದಲೂ ಇಂಧನಕ್ಕೆ ಕೆಲವು ಹಿಮವಿರೋಧಿ ರಾಸಾಯನಿಕಗಳನ್ನು ಬೆರಸುವುದರಿಂದಲೂ ಅಂತಃಕ್ಷೇಪಣ ಕಾಬ್ರ್ಯುರೇಟರುಗಳ ಬಳಕೆಯಿಂದಲೂ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗಿದೆ.

 

(ಕೆ.ವಿ.ಎಸ್.)

(ಪರಿಷ್ಕರಣೆ: ಹೆಚ್.ಆರ್.ಆರ್.)

 